ಹಚ್ಚೊಳ್ಳಿ ಪೊಲೀಸರ ‘ಖಾಕಿ’ ಕಳ್ಳಾಟ ಬಯಲು
ಬಳ್ಳಾರಿ: ನೀವು ಬಾಲ್ಯದಲ್ಲಿ ಆಡಿದ ‘ಕಳ್ಳ-ಪೊಲೀಸ್’ ಆಟ ನೆನಪಿದೆಯೇ? ಅಲ್ಲಿ ಪೊಲೀಸರು ಕಳ್ಳರನ್ನು ಹಿಡಿಯುತ್ತಿದ್ದರು. ಆದರೆ, ಬಳ್ಳಾರಿಯ ಗಡಿ ಭಾಗದಲ್ಲಿ ನಡೆಯುತ್ತಿರುವ ಈ ಆಟವೇ ಬೇರೆ. ಇಲ್ಲಿ ಪೊಲೀಸರೇ ಕಳ್ಳರಂತೆ ಹೊಂಚು ಹಾಕುತ್ತಾರೆ, ವೇಷ ಮರೆಸಿ ಸುಲಿಗೆ ಮಾಡುತ್ತಾರೆ! ಇದು ಹಚ್ಚೊಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ರೋಚಕ ಕಥೆ.
ಗಡಿ ಕಾಯುವವರು ‘ಗಂಟು’ ಹೊಡೆಯುವವರಾದರೇ?
ಬಳ್ಳಾರಿ ಜಿಲ್ಲೆಯ ಸಿರಿಗುಪ್ಪ ಸಿಪಿಐ ವ್ಯಾಪ್ತಿಯ ಹಚ್ಚೊಳ್ಳಿ ಪೊಲೀಸ್ ಠಾಣೆ ಎಂದರೆ ಕರ್ನಾಟಕ-ಆಂಧ್ರದ ಗಡಿ ಕಾಯುವ ಪ್ರಮುಖ ತಾಣ. ಆಂಧ್ರದ ಕೌತಾಳಂ, ಆದೋನಿ ಭಾಗಗಳಿಗೆ ಕರ್ನಾಟಕದಿಂದ ಮದ್ಯ ಸರಬರಾಜು ಮಾಡುವ ದಂಧೆಕೋರರಿಗೆ ಈ ಪೊಲೀಸರೇ ‘ಅನ್ನದಾತರು’. ಮುಂಚಿತವಾಗಿಯೇ ‘ಕಮಿಟ್ಮೆಂಟ್‘ ಮಾಡಿಕೊಂಡರೆ ದಾರಿ ಸುಗಮ. ಇಲ್ಲವಾದರೆ, ದಂಧೆಕೋರನ ಮೈಮೇಲಿನ ಬಟ್ಟೆಯನ್ನೂ ಬಿಡದಂತೆ ಸುಲಿಗೆ ಮಾಡುವುದು ಇಲ್ಲಿನ ಪದ್ಧತಿ ಎಂಬ ಆರೋಪವಿದೆ.
ದೈವಭಕ್ತರನ್ನೇ ಟಾರ್ಗೆಟ್ ಮಾಡಿದ ‘ಖಾಕಿ ಕಿರಾತಕರು’
ದೇವಸ್ಥಾನಕ್ಕೆ ಹೋಗಿ ಬರುವ ಅಮಾಯಕ ಭಕ್ತರನ್ನು ಹಿಡಿದು ಹಣ ಕೀಳುವುದು ಇಲ್ಲಿನ ಪೊಲೀಸರ ನಿರಂತರ ಕಾಯಕ. ಕೌತಾಳಂನಿಂದ ಬರುವಾಗ ಸ್ವಲ್ಪ ‘ನೀರಾ’ (ಹೆಂಡ) ತಂದ ಯುವಕರನ್ನು ತಡೆದ ಪೊಲೀಸರು, ಮೊದಲು ₹50,000 ಡಿಮ್ಯಾಂಡ್ ಮಾಡುತ್ತಾರೆ. ಯುವಕರು ಕೈಕಾಲು ಹಿಡಿದರೂ ಬಿಡದ ಪೊಲೀಸಪ್ಪ ಲಾಠಿಯಿಂದ ಮನಬಂದಂತೆ ಥಳಿಸಿ, ಕೊನೆಗೆ ₹15,000ಕ್ಕೆ ಡೀಲ್ ಕುದುರಿಸುತ್ತಾನೆ.
ಪೊಲೀಸಪ್ಪನ ಓವರ್ ಕಾನ್ಫಿಡೆನ್ಸ್: ಮೊಬೈಲ್ ಚೆಕ್ಕಿಂಗ್ ಪ್ರಹಸನ!
ಇಲ್ಲಿಯೇ ಅಸಲಿ ಮಜಾ ಇರುವುದು. ಹಣ ವಸೂಲಿ ಮಾಡುವಾಗ ಪೊಲೀಸಪ್ಪನಿಗೆ ಒಂದು ಕ್ಷಣ ಅನುಮಾನ ಬರುತ್ತದೆ. ಎಲ್ಲಿ ಈ ಹುಡುಗರು ವಿಡಿಯೋ ಮಾಡಿಕೊಳ್ಳುತ್ತಿಲ್ಲವಲ್ಲ ಎಂದು ಭಾವಿಸಿದ ಆತ, ತಕ್ಷಣ ಆ ಯುವಕರ ಮೊಬೈಲ್ಗಳನ್ನು ಕಸಿದುಕೊಂಡು ತಪಾಸಣೆ ನಡೆಸುತ್ತಾನೆ. ಗ್ಯಾಲರಿ, ವಾಟ್ಸಾಪ್ ಎಲ್ಲವನ್ನೂ ಜಾಲಾಡಿ, “ಯಾವುದೂ ರೆಕಾರ್ಡ್ ಆಗಿಲ್ಲ” ಎಂದು ಖಚಿತಪಡಿಸಿಕೊಂಡು ನಿಟ್ಟುಸಿರು ಬಿಡುತ್ತಾನೆ.
ಆದರೆ ಪಾಪ, ಆ ಪೊಲೀಸಪ್ಪನಿಗೆ ಗೊತ್ತಿರಲಿಲ್ಲ; ಆ ಯುವಕರು ಅವನಗಿಂತಲೂ ಹತ್ತು ಹೆಜ್ಜೆ ಮುಂದಿದ್ದರು! ಅವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡುವ ಸಾಹಸಕ್ಕೆ ಹೋಗಲೇ ಇಲ್ಲ. ಬದಲಾಗಿ, ತಮ್ಮ ಬಳಿಯಿದ್ದ ‘ಹಿಡನ್ ಕ್ಯಾಮೆರಾ’ (Hidden Camera) ಮೂಲಕ ಪೊಲೀಸಪ್ಪನ ಪ್ರತಿಯೊಂದು ಲಾಠಿ ಏಟನ್ನು, ಆತ ನಡೆಸಿದ ಹಣದ ಚೌಕಾಶಿಯನ್ನು ಅತ್ಯಂತ ಸ್ಪಷ್ಟವಾಗಿ ಸೆರೆಹಿಡಿದಿದ್ದರು. ಪೊಲೀಸಪ್ಪ ತನ್ನ ಶೌರ್ಯ ಪ್ರದರ್ಶಿಸಿ ಮೊಬೈಲ್ ಚೆಕ್ ಮಾಡುತ್ತಿದ್ದರೆ, ಇತ್ತ ಯುವಕರು ಲಾಠಿ ಪೆಟ್ಟಿನ ನೋವಿನಲ್ಲೂ ಮುಸಿಮುಸಿ ನಗುತ್ತಿದ್ದರು!
ಮಾಹಿತಿ ನೀಡುವವರೇ ‘ಪಾರ್ಟ್ನರ್ಸ್’
ಹಣವನ್ನು ತನ್ನ ಅಕೌಂಟ್ಗೆ ಹಾಕಿಸಿಕೊಳ್ಳದೆ, ಕ್ಯಾನ್ ವ್ಯಾಪಾರ ಅಂಗಡಿಯವನ ಫೋನ್-ಪೇಗೆ ಹಾಕಿಸುವ ಮೂಲಕ ಪೊಲೀಸಪ್ಪ ಸೇಫ್ ಎಂದುಕೊಂಡಿದ್ದ. ಆದರೆ ಮಾಹಿತಿ ನೀಡುವವರು ಮತ್ತು ಪೊಲೀಸರು ಹೇಗೆ 50:50 ಪಾಲಿನ ಮೇಲೆ ಸುಲಿಗೆ ಮಾಡುತ್ತಾರೆ ಎಂಬುದು ಈಗ ಜಗಜ್ಜಾಹೀರಾಗಿದೆ.
Discover more from somekranti.com
Subscribe to get the latest posts sent to your email.