ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ ಶೆಟ್ಟಿ ಅವರು ಉದ್ಘಾಟಿಸಿದರು
ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ ಶೆಟ್ಟಿ ಅವರು ಉದ್ಘಾಟಿಸಿದರು
ಕಾರಟಗಿ: ಮಕ್ಕಳಿಗಾಗಿ ಕಾನೂನು ಅನೇಕ ಹಕ್ಕುಗಳನ್ನು ನೀಡಿದ್ದು ವಿದ್ಯಾರ್ಥಿಗಳು ಅವುಗಳನ್ನು ತಿಳಿದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ ಶೆಟ್ಟಿ ಅವರು ಹೇಳಿದರು.
ತಾಲೂಕಿನ ಸಿದ್ದಾಪುರ ಗ್ರಾಮದ ಕಸ್ತೂರಿ ಬಾ ಗಾಂಧಿ ವಸತಿ ವಿದ್ಯಾಲಯದ ಆವರಣದಲ್ಲಿ ಭಾನುವಾರ ರಾಜ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗಂಗಾವತಿ ಕಾನೂನು ಸೇವಾ ಸಮಿತಿ, ಜಿಲ್ಲಾ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಪೋಕ್ಸೋ ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಯ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಮುಖ್ಯವಾಗಿ ಕಾನೂನಿನ ಜ್ಞಾನವನ್ನು ಪಡೆದು ಪಡೆದುಕೊಳ್ಳಬೇಕು. ಜನರಿಗೆ ಮತ್ತು ಮಕ್ಕಳಿಗೆ ಕಾನೂನಿನ ಅರಿವನ್ನು ಮೂಡಿಸುವುದು ಕಾನೂನು ಸೇವಾ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. ಕಾನೂನು ಗೊತ್ತಿಲ್ಲದೆ ನಾನು ತಪ್ಪು ಮಾಡಿದೆ ಎಂದರೆ ನ್ಯಾಯಾಲಯದಲ್ಲಿ ನಿಮಗೆ ಶಿಕ್ಷೆ ವಿನಾಯಿತಿ ದೊರೆಯುವುದಿಲ್ಲ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು.ಗ್ರಾಮೀಣ ಭಾಗದಲ್ಲಿ ಈವರೆಗೆ ಬಹುತೇಕ ಜನರಿಗೆ ಮಗು ಹುಟ್ಟಿದ ನಂತರ ಜನನ ಪ್ರಮಾಣ ಪತ್ರ ಮಾಡಿಸುವುದೇ ತಿಳಿದಿಲ್ಲ.ಕಾನೂನು ಸೇವಾ ಪ್ರಾಧಿಕಾರ ಮತ್ತೊಂದು ಮುಖ್ಯ ಉದ್ದೇಶವೆಂದರೆ ಉಚಿತ ಕಾನೂನು ನೆರವು ನೀಡಲಾಗುತ್ತದೆ. ಎಲ್ಲರಿಗೆ ಈ ನೆರವು ದೊರೆಯುವುದಿಲ್ಲ ಎನ್ನುವುದನ್ನು ತಿಳಿಯಬೇಕು. ಲೋಕ ಅದಾಲತ್ ನಲ್ಲಿ ಒಂದು ಪ್ರಕರಣ ರಾಜಿಯಾದರೆ ಅಂದು ಅಂತಿಮವಾಗುತ್ತದೆ. ಹೀಗಾಗಿ ಈ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು. 20 ಸಾವಿರಕ್ಕೂ ಹೆಚ್ಚು ಮಕ್ಕಳು ವಯಸ್ಕಗಿಂತ ಮುಂಚೆಯೇ ಗರ್ಭಿಣಿರಾದ ವರದಿ ಪತ್ರಿಕೆಗಳಲ್ಲಿ ಓದಿದ್ದೇನೆ. ಮಕ್ಕಳು ನಿಮ್ಮ ಶಿಕ್ಷಣ ಮುಗಿಯುವ ವರೆಗೂ ಇತರೆ ವಿಷಯಗಳತ್ತ ಗಮನ ನೀಡದೇ ವಿದ್ಯಾಭ್ಯಾಸದತ್ತ ಮಾತ್ರ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಇಂದು ಜೈಲು ಶಿಕ್ಷೆ ಅನುಭವಿಸುವ ಶೇ. 80 ರಷ್ಟು ಜನರು ಪೋಕ್ಸೋ ಖೈದಿಗಳೇ ಇದ್ದಾರೆ. ಪೋಕ್ಸೋ ಕೇಸ್ ನಲ್ಲಿ ನಿಮಗೆ ಬೇಲ್ ಸಿಗಲ್ಲ. ಈ ಪ್ರಕರಣದಲ್ಲಿ 10 ರಿಂದ 20 ವರ್ಷ ಶಿಕ್ಷೆಯಾಗುತ್ತೆ. 18ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಲೈಂಗಿಕ ಸಂಪರ್ಕ ಹೊಂದುವುದು ಪೋಕ್ಸೋ ಪ್ರಕರಣವಾಗುತ್ತದೆ ಎಂದರು.
ಮಂಗಳೂರು ಜಿಲ್ಲಾ ನ್ಯಾಯಾಧೀಶರು ಹಾಗೂ ಕಾಯಂ ಜನತಾ ನ್ಯಾಯಲಯದ ಅಧ್ಯಕ್ಷರಾದ ಜಯಶಂಕರ್ ಅವರು ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ 2012ರಲ್ಲಿ ಜಾರಿಗೆ ಬಂದಿದೆ. ಆದರೂ, ಇಂದಿಗೂ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿವೆ. ಸಾರ್ವಜನಿಕರಿಗೆ ಹಾಗೂ ಮಕ್ಕಳಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿದಾಗ ಪ್ರಕರಣಗಳು ಮುಂದಿನ ದಿನಗಳಲ್ಲಿ ಕಡೆಮೆಯಾಗಬಹುದು ಎಂಬ ನಂಬಿಕೆಯಿದೆ. ಬಾಲ್ಯ ವಿವಾಹದಲ್ಲಿಕೊಪ್ಪಳ ಜಿಲ್ಲೆ ರಾಜ್ಯದಲ್ಲಿ 7ನೇ ಸ್ಥಾನದಲ್ಲಿದೆ ಎಂಬ ವರದಿಯಿದೆ. ಪೋಕ್ಸೋ ಹಾಗೂ ಬಾಲ್ಯ ವಿವಾಹದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾದ ಅವಶ್ಯಕತೆಯಿದೆ ಎಂದರು.
ಗಂಗಾವತಿಯ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಮಾತನಾಡಿ, ಬಾಲ್ಯ ವಿವಾಹ ಹಾಗೂ ಪೋಕ್ಸೋ ಕಾಯ್ದೆ ಗಳು ಲಕ್ಷ್ಮಣ ರೇಖೆ ಇದ್ದಂತೆ. ಹಾಗಾಗಿ ಮಕ್ಕಳು ಈ ಎರಡು ಕಾಯ್ದೆಗಳನ್ನು ದಾಟಿದರೆ ಮುಂದಿನ ಜೀವನ ಬಹಳ ಸಂಕಷ್ಟಕ್ಕೆ ಸಿಲುಕುತ್ತದೆ ಎಂದರು.
ಹೆಚ್.ಆರ್.ಎ.ಸಿ.ಎಫ್ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಮೋಹನ್ ರಾವ್ ನಾಲ್ವಡೆ, ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ಎಸ್. ದರಗದ್, ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಜೆ.ಬಿ. ಹಳ್ಳಾಕಾಯಿ, ಗಂಗಾವತಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮೇಘಾ ಸೋಮಣ್ಣನವರ, ತಹಸೀಲ್ದಾರ್ ಎಂ. ಕುಮಾರಸ್ವಾಮಿ, ತಾಪಂ ಇ.ಒ ಲಕ್ಷ್ಮೀದೇವಿ, ಬಿಇಒ ನಟೇಶ್, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್, ಗಂಗಾವತಿ ವಕೀಲರ ಸಂಘದ ಅಧ್ಯಕ್ಷರಾದ ಶರಣಬಸಪ್ಪ ನಾಯಕ, ಸಿಡಿಪಿಒ ವಿರುಪಾಕ್ಷಿ ಸ್ವಾಮಿ, ಕೆಜಿಬಿವಿ ಮುಖ್ಯಶಿಕ್ಷಕ ಚಂದ್ರಶೇಖರ್ ಗಣವಾರಿ ಸೇರಿ ಕೆಜಿಬಿವಿ, ಮೊರಾರ್ಜಿ, ಹಾಗೂ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳಿದ್ದರು.
ಸಿದ್ದಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಶಶಿಧರ ಶೆಟ್ಟಿ ಅವರು ಮಾತನಾಡಿದರು
ನಿಮ್ಮ ಮೇಲೆ ದೌರ್ಜನ್ಯವಾದರೆ ವಿದ್ಯಾರ್ಥಿಗಳು ವಿರೋಧಿಸಬೇಕು
ದೇಶದಲ್ಲಿ ಶೇ. 42 ರಷ್ಟು ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದೆ. ಮಕ್ಕಳಿಗೆ ಲೈಂಗಿಕ ದೌರ್ಜನ್ಯವಾದರೆ ಅದನ್ನು ನೀವುಗಳು ವಿರೋಧಿಸಬೇಕು. ಯಾರಿಗೂ ಹೆದರದೆ ವಿರೋಧಿಸುವ ಧೈರ್ಯ ತೋರಬೇಕು. ಈ ಭಾಗದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿವೆ. ದುರಾದೃಷ್ಟವಶಾತ್ ಮನೆಯವರೇ ಬಾಲ್ಯ ವಿವಾಹ ನಡೆಸುತ್ತಿರುವುದು ದುರಂತ. ಅದರಲ್ಲೂ ಸಾಮೂಹಿಕ ವಿವಾಹದಲ್ಲಿ ಸಹ ಬಾಲ್ಯ ವಿವಾಹ ಮಾಡಲಾಗುತ್ತದೆ. ಭ್ರೂಣ ಹತ್ಯೆ ದೇಶಾದ್ಯಂತ ಇರುವ ದೊಡ್ಡ ಪೀಡುಗಾಗಿದೆ. ವೈದ್ಯರು ದೇವರಿಗೆ ಸಮಾನ ಎಂಬ ಮಾತಿದೆ. ಆದರೆ, ಕೆಲವರು ಇದನ್ನು ಹಣ ಗಳಿಸುವ ಮಾರ್ಗ ಮಾಡಿಕೊಂಡಿದ್ದಾರೆ. ಭ್ರೂಣ ಹತ್ಯೆ ಮಾಡುವುದು ಅನಾಗರಿಕ ವಿಚಾರವಾಗಿದೆ ಎಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಶಶಿಧರ ಶೆಟ್ಟಿ ಅವರು ವಿಷಾದ ವ್ಯಕ್ತಪಡಿಸಿದರು.