ವಿಜಯನಗರ DHO ಡಾ.ಎಲ್.ಆರ್.ಶಂಕರ್ ನಾಯ್ಕ್ ಮೇಲೆ ಲೋಕಾಯುಕ್ತ ದಾಳಿ
ವಿಜಯನಗರ DHO ಮೇಲೆ ಲೋಕಾಯುಕ್ತ ದಾಳಿ: 11 ನಿವೇಶನ, 5 ಮನೆ ಸೇರಿ ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ!
ಹೊಸಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಅವರ ಅಕ್ರಮ ಆಸ್ತಿ ಗಳಿಕೆ ಬೆನ್ನತ್ತಿದ ಲೋಕಾಯುಕ್ತ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಮಂಗಳವಾರ ಮುಂಜಾನೆಯಿಂದ ಸಂಜೆಯವರೆಗೆ ನಡೆದ ಸುದೀರ್ಘ ಕಾರ್ಯಾಚರಣೆಯಲ್ಲಿ ಬರೋಬ್ಬರಿ 4.89 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಲಾಗಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ ಆರೋಪದಡಿ ವಿಜಯನಗರ ಡಿಎಚ್ಒ ಅವರ ನಿವಾಸ ಮತ್ತು ಕಚೇರಿ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು.
ಬೆಳ್ಳಂಬೆಳಗ್ಗೆ ಶುರುವಾದ ‘ಲೋಕ’ ಶಿಕಾರಿ
ವಿಜಯನಗರ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಅಮರೇಶ್, ರಾಜೇಶ್ ಲಮಾಣಿ ಹಾಗೂ ಕೊಪ್ಪಳ-ಬಳ್ಳಾರಿಯ ಲೋಕಾಯುಕ್ತ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿತು. ಮಂಗಳವಾರ ನಸುಕಿನ ವೇಳೆಯೇ ಡಿಎಚ್ಒ ಅವರಿಗೆ ಸಂಬಂಧಿಸಿದ ಸ್ಥಳಗಳಿಗೆ ಲಗ್ಗೆ ಇಟ್ಟ ಅಧಿಕಾರಿಗಳು, ಸಂಜೆಯವರೆಗೂ ಪ್ರತಿಯೊಂದು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.
ಪತ್ತೆಯಾದ ಆಸ್ತಿಯ ಪಟ್ಟಿ ಇಲ್ಲಿದೆ:
ತನಿಖೆಯ ವೇಳೆ ಲಭ್ಯವಾದ ಮಾಹಿತಿಯಂತೆ ಅಧಿಕಾರಿಗಳು ಒಟ್ಟು 4.89 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪಟ್ಟಿ ಮಾಡಿದ್ದಾರೆ.
ಸ್ಥಿರಾಸ್ತಿ (4.20 ಕೋಟಿ ರೂ.): ವಿವಿಧ ಬಡಾವಣೆಗಳಲ್ಲಿರುವ 11 ಬೆಲೆಬಾಳುವ ನಿವೇಶನಗಳು ಹಾಗೂ 5 ಸುಸಜ್ಜಿತ ವಾಸದ ಮನೆಗಳನ್ನು ಪತ್ತೆ ಮಾಡಲಾಗಿದೆ.
ನಗದು ಮತ್ತು ಆಭರಣ: ಮನೆಯಲ್ಲಿ ದಾಸ್ತಾನಿರಿಸಿದ್ದ 15.56 ಲಕ್ಷ ರೂಪಾಯಿ ನಗದು ಹಾಗೂ 16.75 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಚರಾಸ್ತಿಗಳು: 9.60 ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಹಾಗೂ ಮನೆಯಲ್ಲಿರುವ 31.90 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕಾನೂನು ಕ್ರಮ
ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಡಿಎಚ್ಒ ವಿರುದ್ಧ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪತ್ತೆಯಾದ ಆಸ್ತಿಗಳ ಮೂಲದ ಬಗ್ಗೆ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರ ಬಳಿ ಇಷ್ಟೊಂದು ಪ್ರಮಾಣದ ಸ್ಥಿರಾಸ್ತಿ ಪತ್ತೆಯಾಗಿರುವುದು ಜಿಲ್ಲೆಯಾದ್ಯಂತ ಭಾರೀ ಸಂಚಲನ ಮೂಡಿಸಿದೆ.
Discover more from somekranti.com
Subscribe to get the latest posts sent to your email.